ಗ್ಯಾಸರ್, ಹರ್ಬರ್ಟ್ ಸ್ಪೆನ್ಸರ್ -
1888-1963. ಅಮೆರಿಕನ್ ದೇಹ ವಿಜ್ಞಾನಿ. ವಿಸ್ಕಾನ್ಸಿನ್ನಿನ ಪ್ಲಾಟ್‍ವಿಲ್ ನಗರದಲ್ಲಿ 1888ರ ಜುಲೈ 6ರಂದು ಜನಿಸಿದ. ಅಲ್ಲಿನ ವಿಶ್ವವಿದ್ಯಾಲಯದಲ್ಲೇ ವಿದ್ಯಾಭ್ಯಾಸ ಮಾಡಿ ಪದವೀಧರನಾದ (1910). ಇನ್ನೊಬ್ಬ ಸಮಕಾಲೀನ ಪ್ರಸಿದ್ಧ ದೇಹವಿಜ್ಞಾನಿ ಜೋಸೆಫ್ ಎರ್ಲಾಂಗರ್ (1874-1965) ಎಂಬಾತನ ಜೊತೆಯಲ್ಲಿ ಗ್ಯಾಸರನ ಸಂಶೋಧನೆಗಳು 1916ರಲ್ಲಿ ಪ್ರಾರಂಭವಾದುವು. ಕ್ಯಾಥೋಡ್ ಕಿರಣ ಆಂದೋಳಲೇಖಿ (ಕ್ಯಾಥೋಡ್ ರೇ ಆಸಿಲ್ಲೋಗ್ರಾಫ್) ಎಂಬ ಸಾಧನವನ್ನು ಉಪಜ್ಞಿಸಿ ಅದರ ನೆರವಿನಿಂದ ನರಗಳ ಜೈವಿಕ ವಿದ್ಯುತ್ ಕ್ರಿಯೆಗಳನ್ನು ಸಮರ್ಥವಾಗಿ ವಿವರಿಸಿದ (1921) ಹಿರಿಮೆ ಇವರದು. ಈ ಸಾಧನೆ ಗ್ಯಾಸರ್ ಮತ್ತು ಎರ್ಲಾಂಗರ್‍ದ್ವಯರಿಗೆ ದೇಹ ಹಾಗೂ ವೈದ್ಯವಿಜ್ಞಾನ ವಿಭಾಗದ ನೊಬೆಲ್ ಪ್ರಶಸ್ತಿಯನ್ನು ದೊರಕಿಸಿಕೊಟ್ಟಿತು. (1944). ನರಪ್ರಚೋದನೆ (ನರ್ವ್ ಇಂಪಲ್ಸ್) ಎಂಬುದು ವಾಸ್ತವಿಕವಾಗಿ ವಿದ್ಯುದೃಣ ಅಲೆಯಿಂದ ಸಾಗುತ್ತದೆ ಎಂಬುದಾಗಿ ಡ್ಯೂಬಾಯ್ ರೇಮಂಡ್ (1818-1896) ಎಂಬ ದೇಹವಿಜ್ಞಾನಿ ಆ ಮೊದಲೇ ಮುನ್ನುಡಿದಿದ್ದ. ಇದನ್ನು ಗ್ಯಾಸರ್ ಎರ್ಲಾಂಗರ್‍ದ್ವಯರು ತಮ್ಮ ಉಪಕರಣದ ನೆರವಿನಿಂದ ಸ್ಥಿರೀಕರಿಸಿ ನಿಜವೆಂದು ತೋರಿಸಿದರು. ನರಪ್ರಚೋದನೆ ಸಾಗುವ ವೇಗ ಗಣಿತಶಾಸ್ತ್ರದ ಪ್ರಕಾರ ಮತ್ತು ಇತರ ಕಾರಣಗಳಿಗೆ ಅನುಸಾರವಾಗಿ ನರಗಳ ಗಾತ್ರವನ್ನೇ ಅವಲಂಬಿಸಿರುತ್ತದೆ ಎಂದು ಖಚಿತಮಾಡಿಕೊಟ್ಟರು. ನರಪ್ರಚೋದನೆಯ ಸಾಗಣೆಯ ವೇಗವನ್ನೂ ನರಗಳ ಗಾತ್ರವನ್ನೂ ಗಮನಿಸಿ ದೇಹದಲ್ಲಿನ ನರಗಳನ್ನೆಲ್ಲ ಅವರು ಂ, ಃ, ಅ ಎಂಬ ಮೂರು ರೀತಿಯವಾಗಿ ವಿಂಗಡಿಸಿದರು.

ಗ್ಯಾಸರ್ ಅಮೆರಿಕದ ಸೆಂಟ್ ಲೂಯಿಯ ವಾಷಿಂಗ್‍ಟನ್ ವಿಶ್ವವಿದ್ಯಾಲಯದಲ್ಲಿ ಔಷಧಶಾಸ್ತ್ರದ ಪ್ರಾಧ್ಯಾಪಕನಾಗಿ 1921ರಿಂದ 1931ರ ವರೆಗೆ ಸೇವೆ ಸಲ್ಲಿಸಿದ. ಬಳಿಕ 4 ವರ್ಷ ಕಾರ್ನೆಲ್ ವಿಶ್ವವಿದ್ಯಾಲಯದಲ್ಲಿ ದೇಹವಿಜ್ಞಾನದ ಪ್ರಾಧ್ಯಾಪಕನಾಗಿದ್ದ. 1935ರಲ್ಲಿ ಅಮೆರಿಕದ ರಾಕ್‍ಫೆಲ್ಲರ್ ಇನ್‍ಸ್ಟಿಟ್ಯೂಟ್ ಫಾರ್ ಮೆಡಿಕಲ್ ರೀಸರ್ಚ್ ಸಂಸ್ಥೆಯ ಮುಖ್ಯಸ್ಥನಾಗಿ 1953ರಲ್ಲಿ ನಿವೃತ್ತಿಗೊಂಡ. ಈತ ಮೃತನಾದದ್ದು 1963ರ ಮೇ 11ರಂದು.
(ಎಸ್.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ